ಪರಮೇಶ್ವರಾಚಾರ್ಯ, ಎಂ (ರಥಶಿಲ್ಪಿ)
(1924- ) ಶಾಸ್ತ್ರೀಯ ರೀತಿಯಲ್ಲಿ ರಥ ನಿರ್ಮಾಣಮಾಡುವ ನಾಲ್ಕೈದು ಅಪರೂಪದ ರಥ ಶಿಲ್ಪಿಗಳ ಮನೆತನಗಳಲ್ಲಿ ಇಂದು ಪರಮೇಶ್ವರಾಚಾರ್ಯರ ಮನೆತನವೂ ಒಂದು. ಪರಮೇಶ್ವರಾಚಾರ್ಯರು ಜೂನ್ 24, 1924ರಲ್ಲಿ ಕರ್ನಾಟಕದ ಹೊಳಲ್ಕೆರೆ ತಾಲ್ಲೂಕಿನ ನೂಲೇನೂರು ಗ್ರಾಮದಲ್ಲಿ ಜನಿಸಿದರು. ತಂದೆ ಮಾನಾಚಾರ್ಯರು, ತಾಯಿ ವೀರಮ್ಮ. ತಂದೆ ಮತ್ತು ತಾಯಿ ಇವರಿಬ್ಬರದೂ ವಂಶಪಾರಂಪರ್ಯವಾಗಿ ಶಿಲ್ಪ ಕಲೆ ವಿಕಾಸಗೊಂಡ ಮನೆತನ. ಶಿಲ್ಪ ಕಲೆ ಪರಮೇಶ್ವರಾಚಾರ್ಯರ ಧಮನಿಗಳಲ್ಲಿ ಹರಿಯುತಿತ್ತು. ತಂದೆಯೇ ಮೊದಲ ಗುರು. ಆದರೆ ಆ ಭಾಗ್ಯ ಕ್ಷಣಿಕ. ಇವರು ಬಾಲ್ಯಾವಸ್ಥೆಯಲ್ಲಿಯೇ ತಾಯಿ-ತಂದೆಗಳನ್ನು ಕಳೆದುಕೊಂಡು ಸೋದರ ಮಾವಂದಿರಾದ ಕೆಂಚವೀರಾಚಾರ್ಯ ಮತ್ತು ಕಾಳಾಚಾರ್ಯ ಇವರ ಪೋಷಣೆಯಲ್ಲಿ ಬೆಳೆದರು.
	ಬಾಲ್ಯದಲ್ಲಿ ಕಾಳಾಚಾರ್ಯರಲ್ಲಿ ರಥ ಶಿಲ್ಪವನ್ನು ಶಿಲಾ ಹಾಗೂ ಲೋಹ ಶಿಲ್ಪಗಳನ್ನು ಅಭ್ಯಾಸ ಮಾಡಿದರು, ಬದುಕಲು ದುಡಿಯಬೇಕಾದ ಅನಿವಾರ್ಯತೆ. ಲೌಕಿಕ ವಿದ್ಯಾಭ್ಯಾಸ ಲೋಯರ್ ಸೆಕೆಂಡರಿಗೆ ಸೀಮಿತವಾಯಿತು. ವಿವಾಹ ನಂತರ ಮಾವನವರಾದ ಗೊಪ್ಪೇನಹಳ್ಳಿ ಚಿಕ್ಕ ವೀರಾಚಾರ್ಯ ಅವರ ಮಾರ್ಗದರ್ಶನದಲ್ಲಿ ಹಿತ್ತಾಳೆ, ತಾಮ್ರದ ಉಬ್ಬುಕೆತ್ತನೆ, ಚಿನ್ನ ಬೆಳ್ಳಿ ನಕಾಸೆ ಕೆಲಸವನ್ನು ಅಭ್ಯಾಸ ಮಾಡಿದರು. ನಂತರದಲ್ಲಿ ಶಿಲಾ ಶಿಲ್ಪ, ಕಂಚಿನ ಪ್ರತಿಮಾ ನಿರ್ಮಾಣ ಶಿಲ್ಪಗಳನ್ನೂ ರೂಢಿಸಿಕೊಂಡು ಬಹುಮುಖ ಕಲಾವಿದರಾದರು. ಸೋದರತ್ತೆಯ ಮಗನಾದ ಮೌನಾಚಾರ್ಯರ ಜೊತೆ ಸೇರಿ, ಸೋದರಮಾವ ಕಾಳಾಚಾರ್ಯರ ಮಾರ್ಗದರ್ಶನದಲ್ಲಿ ಮೊದಲು ರಚಿಸಿದ ರಥ ನೀರಗುಂದದ 25 ಅಡಿ ಎತ್ತರದ ರಥ. ಜನಮೆಚ್ಚಿದರು ಉತ್ಸಾಹ ಗರಿ ಗೆದರಿತು. ಅನಂತರ ಅಜ್ಜಿಹಳ್ಳಿಯ ಶಿಲ್ಪ ಶಾಸ್ತ್ರ ಪ್ರವೀಣರಾದ ನಾಗೇಂದ್ರ ಚಾರ್ಯರಲ್ಲಿ ಶಿಕ್ಷಣ. ನಾಗೇಂದ್ರಾಚಾರ್ಯರು ಮೈಸೂರಿನ ರಾಜಾಶ್ರಾಯದಲ್ಲಿ ಶಿಲ್ಪಕಲೆಯನ್ನು ಬೆಳೆಸಿದವರು. ಮೈಸೂರು ಚಾಮುಂಡೇಶ್ವರಿಯ ಅಪೂರ್ವವಾದ ರಥವನ್ನು ಪೂರ್ಣಗೊಳಿಸಿದವರು ನಾಗೇಂದ್ರಾಚಾರ್ಯರು. 
ಪರಂಪರೆಯಿಂದ ಶಿಲ್ಪಶಾಸ್ತ್ರವನ್ನು, ಶಿಲ್ಪವನ್ನು ಗುರುಮುಖೇನ ಅಧ್ಯಯನ ಮಾಡಿರುವ ಪರಮೇಶ್ವರಾಚಾರ್ಯರು ಕಂಚು, ಪಂಚಲೋಹ, ಶಿಲೆ, ಚಿನ್ನ ಬೆಳ್ಳಿ ತಾಮ್ರಗಳಲ್ಲಿ ಶಿಲ್ಪಕೃತಿಗಳನ್ನು ರಚಿಸುವ ಸಾಮಥ್ರ್ಯವನ್ನು ಪಡೆದುಕೊಂಡಿದ್ದಾರೆ. ತಮ್ಮಲ್ಲಿ ಅಭ್ಯಾಸಮಾಡಲು ಬಂದವರಿಗೆ ನಿರ್ವಂಚನೆಯಿಂದ ಶಿಲ್ಪವಿದ್ಯೆಯನ್ನು ಕಲಿಸಿದ್ದಾರೆ. ಹೀಗೆ ಇವರಲ್ಲಿ ಶಿಲ್ಪವನ್ನು ಕಲಿತ ಶಿಷ್ಯರು ಹಲವಾರು ಮಂದಿ ಇದ್ದಾರೆ. ಪರಮೇಶ್ವರಾಚಾರ್ಯರ ಹಿರಿಯ ಮಗ ಶ್ರೀಕಂಠಾಚಾರ್ಯ ಶಿಲ್ಪಕಲೆಯಲ್ಲಿ ಪರಿಣಿತನಾಗಿ, ಪಳಗಿ ಒಬ್ಬ ಸಮರ್ಥ ರಥ ಶಿಲ್ಪಿಯಾಗಿದ್ದಾನೆ. ತಂದೆಯ ಸಾಧನೆಗೆ ಬೆಂಬಲವಾಗಿ ದುಡಿಯುತ್ತ. ಕುಲ ಕಸುಬನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಹೊಣೆ ಹೊತ್ತಿದ್ದಾನೆ. 
ಪರಮೇಶ್ವರಾಚಾರ್ಯರು ಶಿಲ್ಪಕಲಾ ಲೋಕಕ್ಕೆ ನೀಡಿದ ಕೊಡುಗೆ;
	ಲೋಹ: ದೇವರಹಳ್ಳಿ ರಂಗನಾಥ ಸ್ವಾಮಿಗೆ, ಬೆಳ್ಳಿ ಪಲ್ಲಕ್ಕಿ, ಚಿತ್ರದುರ್ಗ ಜಿಲ್ಲೆಗೆ ಬೆಳ್ಳಿಯಲ್ಲಿ ವೀರಭದ್ರಸ್ವಾಮಿ, ತರಿಕೆರೆಗೆ ಪಂಚಲೋಹದ ಬನಶಂಕರಿ, ಮಳವಳ್ಳಿಯ ಆಂಜನೇಯಸ್ವಾಮಿಗೆ ಪ್ರಭಾವಳಿ. 
	ಶಿಲೆ: ಚಳ್ಳಕೆರೆಗೆ ಕುಮಾರಸ್ವಾಮಿ ವಿನಾಯಕ, ಶಿವಮೊಗ್ಗಕ್ಕೆ ಅಂಬಾಭವಾನಿ, ಬಳ್ಳಾರಿಗೆ ವೇಣುಗೋಪಾಲ, ಹೊಳಲೂರಿಗೆ ವೀರಭದ್ರ ಸ್ವಾಮಿ, ಚಿರಡೋಣಿಗೆ ಮಹಾಕಾಳಿಕಾಂಬ, ಅರಸೀಕೆರೆಗೆ ಅಂಬಾಭವಾನಿ. ಇವೆಲ್ಲಾ ಶಾಸ್ತ್ರೀಯ ದೇವತಾ ಮೂರ್ತಿಗಳು.
	ರೂಪಶಿಲ್ಪ ಸಿದ್ಧಾರೂಢ ಸ್ವಾಮಿಗಳು, ಹರ್ಡೇಕರ್ ಮಂಜಪ್ಪ, ಮಹಾತ್ಮಾ ಗಾಂಧಿ, ಮರಳು ಸಿದ್ಧೇಶ್ವರ ಸ್ವಾಮಿ. ದಾವಣೆಗೆರೆಗೆ ಬಾಬಾ ಅಂಬೇಡ್ಕರ್ ವಿಗ್ರಹ, ಗಾಂಜಿ ವೀರಪ್ಪನವರ ಆಳೆತ್ತರದ ಕಂಚಿನ ಮೂರ್ತಿ, ಆರ್.ಮರುಳಪ್ಪನವರ ಆಳೆತ್ತರದ ಕಂಚಿನ ವಿಗ್ರಹ ಮುಂತಾದವು.
	ರಥಶಿಲ್ಪ: ನಿರಗುಂದದ ಭೈರವೇಶ್ವರ ರಥ, ಯಗಚಿಯ ಮಲ್ಲಿಕಾರ್ಜುನ ಸ್ವಾಮಿ ರಥ, ಬಿಂಡಿಗನವಿಲೆ ಚೆನ್ನಕೇಶವ ಸ್ವಾಮಿ ರಥ, ಮೈಸೂರು ಒಂಟಿಕೊಪ್ಪಲ್ ವೆಂಕಟರಮಣಸ್ವಾಮಿ ರಥ, ಹಂಪೆ ವಿರೂಪಾಕ್ಷಸ್ವಾಮಿ ರಥ, ನಾಯ್ಕನ ಹಟ್ಟಿ ತಿಪ್ಪೇರುದ್ರಸ್ವಾಮಿ ರಥ, ಬಳ್ಳಾರಿ ಕಾಳಿಕಾ ಕಮಠೇಶ್ವರ ರಥ, ಗೊಪ್ಪೇನಹಳ್ಳಿ ಆಂಜನೇಯಸ್ವಾಮಿ ರಥ ಇದಲ್ಲದೆ ಅನೇಕ ದೇವಾಲಯಗಳಿಗೆ ಕುಸುರಿಯ ಕೆಲಸದ ಮರದ ಬಾಗಿಲುಗಳು ರಚಿಸಿದ್ದಾರೆ. ಮೈಸೂರು ವೆಂಕಟರಮಣ ಸ್ವಾಮಿ ರಥ 25 ಅಡಿ ಎತ್ತರದ ರಥ. ಅತ್ಯಂತ ಸುಂದರವಾದ ರಥ ಎಂಬುದು ಹಲವು ತಜ್ಞರ ಅಭಿಮತ. ನಾಯಕನ ಹಟ್ಟಿಯ ತಿಪ್ಪೆಸ್ವಾಮಿ ದೇವಾಲಯದ 68 ಅಡಿ ಎತ್ತರದ ರಥ ಇವರು ನಿರ್ಮಿಸಿರುವ ರಥಗಳಲ್ಲಿ ದೊಡ್ಡದು. 
	ರಥಶಿಲ್ಪ ಪ್ರಕಾರವು ಕರ್ನಾಟಕದಲ್ಲಿ ಈಗ ಬಹುವಾಗಿ ನಶಿಸುತ್ತಿರುವ ಶಾಸ್ತ್ರೀಯವಾದ ಶಿಲ್ಪ ಪದ್ಧತಿ. ಈಗ ನಾಲ್ಕೈದು ಮನೆತನಗಳು ಮಾತ್ರವೇ ದೊರೆಯುತ್ತವೆ. ಶ್ರಮಸಾಧ್ಯವಾದ, ಶಾಸ್ತ್ರ ವಿಚಕ್ಷಣತೆಯನ್ನು ಕೇಳುವ ಈ ವಿಭಾಗಕ್ಕೆ ಪರಮೇಶ್ವರಾಚಾರ್ಯರು ಅಪೂರ್ವವಾದ ಸೇವೆ ಸಲ್ಲಿಸುತ್ತಿದ್ದಾರೆ. ಷಟ್ಟದಿಯಲ್ಲಿ ಪದ್ಯರಚನೆ ಇವರ ಹವ್ಯಾಸ. ನೂರಾರು ಪದ್ಯಗಳನ್ನು ರಚಿಸಿದ್ದಾರೆ. ಇವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ 1995ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರವು ಶಿಲ್ಪಕಲೆಗಾಗಿ ನೀಡುವ ಸರ್ವಶ್ರೇಷ್ಠ ಪುರಸ್ಕಾರ ಜಕಣಾಚಾರಿ ಪ್ರಶಸ್ತಿಯನ್ನು 2000ನೇ ಸಾಲಿನಲ್ಲಿ ಪಡೆದಿದ್ದಾರೆ.					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ